- July 6, 2022
ಕಿಚ್ಚ ಸುದೀಪ್ ಅವರ ಅತಿದೊಡ್ಡ ಯಶಸ್ಸಿಗೆ ಇಂದಿಗೆ 21 ವರ್ಷ!!


‘ಅಭಿನಯ ಚಕ್ರವರ್ತಿ’, ‘ಬಾದ್ ಶಾಹ್’ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಕನ್ನಡ ಚಿತ್ರರಂಗದ ಧೀಮಂತ ನಟ ಕಿಚ್ಚ ಸುದೀಪ್ ಅವರು.ಇಂದು, ಜುಲೈ 6 ಅವರ ಸಿನಿಜೀವನದ ಬಹುಮುಖ್ಯವಾದ ದಿನ. ಇಂದು ಅಭಿಮಾನಿಗಳ ‘ಬಾದ್ ಷಾಹ್’ ಆಗಿರುವ ಇವರು ಒಬ್ಬ ಸಾಮಾನ್ಯ ನಟನಿಂದ ಸೂಪರ್ ಸ್ಟಾರ್ ಎನಿಸಿಕೊಂಡ ಕಾಲದ ನೆನಪಿನ ದಿನ ಇಂದು. ಸುದೀಪ್ ಅವರ ಅಭಿನಯದ ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 21 ವರ್ಷಗಳು ಕಳೆದಿವೆ. ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಸುದೀಪ್ ಅವರು ಪಡೆದ ಮೊದಲ ಅತೀ ದೊಡ್ಡ ಯಶಸ್ಸು ‘ಹುಚ್ಚ’ ಸಿನಿಮಾ ಎಂದರೆ ತಪ್ಪಾಗದು. ಅವರ ನಟನೆ ಅಭಿನಯ ಎಲ್ಲದರಿಂದ ಸಿನಿರಸಿಕರ ಮನಗೆದ್ದು, ಸತತ ಒಂದು ವರ್ಷಗಳ ಕಾಲ ಚಿತ್ರಮಂದಿರಗಳನ್ನ ಈ ಚಿತ್ರ ಬೆಳಗಿತ್ತು.


ಅಂದಿಗೆ ಅವರು ಸ್ಯಾಂಡಲ್ವುಡ್ ಗೆ ಕಾಲಿಟ್ಟು ಆಗಲೇ 4ವರ್ಷಗಳು ಕಳೆದಿದ್ದರೂ, ಹಲವು ಉತ್ತಮ ಚಿತ್ರಗಳನ್ನ ಮಾಡಿದ್ದರು ಸಹ, ಅಂದುಕೊಂಡಂತಹ ಯಶಸ್ಸು ಅವರಿಗೆ ಸಿಕ್ಕಿರಲಿಲ್ಲ. ಆದರೆ ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಹುಚ್ಚ’ ಸಿನಿಮಾ ಅವರ ಕಟ್ ಔಟ್ ಗಾಂಧೀ ನಗರದಲ್ಲಿ ತಲೆಯೆತ್ತುವಂತೆ ಮಾಡಿತ್ತು. ಇದಷ್ಟೇ ಅಲ್ಲದೇ ಇಂದಿನ ದಿನ ಸುದೀಪ್ ಅವರ ವೃತ್ತಿಜೀವನದ ಮತ್ತೊಂದು ಪ್ರಮುಖ ಚಿತ್ರ ಬಿಡುಗಡೆಯಾಗಿತ್ತು. ಕಿಚ್ಚನ ಅಭಿನಯದ ಪ್ರಭುತ್ವವನ್ನ ಪ್ರಪಂಚಕ್ಕೆ ಸಾರಿದಂತ ಸಿನಿಮಾ ‘ಈಗ’ ಇಂದಿಗೆ ‘ಈಗ’ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳು ಕಳೆದಿವೆ.




ತೆಲುಗಿನಲ್ಲಿ ರಾಜಮೌಳಿಯವರ ನಿರ್ದೇಶನದಲ್ಲಿ ಮೂಡಿಬಂದಂತಹ ಈ ಸಿನಿಮಾ ರಾಷ್ಟ್ರಮಟ್ಟದ ಪ್ರೇಕ್ಷಕರನ್ನ ಸೆಳೆದಿತ್ತು. ನಾನಿ,ಸಮಂತಾ ಮುಂತಾದ ಸ್ಟಾರ್ ನಟರು ಚಿತ್ರದಲ್ಲಿದ್ದರೂ ಸಹ ಜನರು ಮಾತನಾಡಿದ್ದು, ಕಿಚ್ಚ ಸುದೀಪ್ ಅವರ ನಟನೆಯ ಬಗ್ಗೆಯೇ. 2012ರ ಜುಲೈ 6ರಂದು ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ತಮ್ಮ ಮನೋಜ್ಞ ನಟನೆಯಿಂದ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿದ್ದರು. ಸಿನಿಮಾ ‘ಮಕ್ಕಿ’ ಎಂಬ ಹೆಸರಿನಲ್ಲಿ ಹಿಂದಿ ಭಾಷೆಗೆ ಕೂಡ ಡಬ್ ಆಗಿತ್ತು.




ಈ ವಿಚಾರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸುದೀಪ್ ಅವರು, ಈ ಎರಡೂ ಚಿತ್ರತಂಡಗಳಿಗೆ ಚಿರಋಣಿ ಎಂದಿದ್ದಾರೆ. “ಒಂದು ಸಿನಿಮಾ ನನ್ನನ್ನು ಕಟ್ಟಿದರೆ, ಇನ್ನೊಂದು ಸಿನಿಮಾ ನನ್ನನ್ನು ಮೇಲಕ್ಕೆತ್ತಿತು” ಎಂದು ಬರೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಆದರ್ಶಮಯ 25ವರ್ಷಗಳನ್ನು ಪೂರೈಸಿರುವ ಸುದೀಪ್ ಅವರು ಸದ್ಯ ತಮ್ಮ ಮುಂದಿನ ಸಿನಿಮಾ ‘ವಿಕ್ರಾಂತ್ ರೋಣ’ದ ಬಿಡುಗಡೆಯ ಭರದಲ್ಲಿದ್ದಾರೆ.






