- May 18, 2022
’21 ಅವರ್ಸ್’ಗೆ ಅಭಿನಯ ಚಕ್ರವರ್ತಿಯ ಆತಿಥ್ಯ.


ಸದ್ಯ ಕನ್ನಡದಲ್ಲಿ ಅತಿ ಹೆಚ್ಚು ಬ್ಯುಸಿ ಆಗಿರುವ ನಟ ಯಾರು ಎಂದು ಯಾವುದೇ ಕನ್ನಡ ಸಿನಿಮಾಭಿಮಾನಿಯಲ್ಲಿ ಕೇಳಿದರೆ, ಅವರು ನೀಡೋ ಹೆಸರುಗಳ ಪಟ್ಟಿಯಲ್ಲಿ ಮೊದಲು ಕಾಣೋ ಹೆಸರು ಡಾಲಿ ಅಲಿಯಾಸ್ ಧನಂಜಯ. ಒಂದರ ಬೆನ್ನಿಗೆ ಇನ್ನೊಂದರಂತೆ ಹಲವು ಅದ್ಭುತ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಧನಂಜಯ್ ಅವರು ಇದೀಗ ತಮ್ಮ ಮುಂದಿನ ಚಿತ್ರ ’21 ಅವರ್ಸ್’ ಬಿಡುಗಡೆಯ ಭರದಲ್ಲಿದ್ದಾರೆ. ಟ್ರೈಲರ್ ನಿಂದ ಕನ್ನಡಿಗರಲ್ಲಿ ಕುತೂಹಲ ಹುಟ್ಟಿಸಿರುವ ಚಿತ್ರತಂಡಕ್ಕೆ ಇದೀಗ ಕಿಚ್ಚ ಸುದೀಪ್ ಅವರಿಂದ ಆತಿಥ್ಯ ದೊರಕಿದೆ.




ಜೈ ಶಂಕರ್ ಎಂಬ ಹೊಸ ನಿರ್ದೇಶಕರ ಕನಸಿನ ಕುಚ್ಚವಾದ ಈ ಸಿನಿಮಾ ಇದೇ ಮೇ 20ರಂದು ಬಿಡುಗಡೆಗೊಳ್ಳಲಿದೆ. ಸದ್ಯ ಸಂಪೂರ್ಣ ಸಿನಿಮಾವನ್ನು ವೀಕ್ಷಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿತ್ರತಂಡವನ್ನು ತಮ್ಮ ಮನೆಗೆ ಬರಮಾಡಿಕೊಂಡು ಆತಿಥ್ಯ ನೀಡಿದ್ದಾರೆ. ತಾನೇ ತನ್ನ ಕೈಯ್ಯಾರೆ ತಯಾರಿಸಿದ ದೋಸೆಯನ್ನ ಉಣಬಡಿಸಿ, ಆನಂದದಿಂದ ಆದರಿಸಿ ಕಳಿಸಿದ್ದಾರೆ ‘ಬಾದ್ ಷಾಹ್’. ಸುದೀಪ್ ಅವರು ಚಿತ್ರವನ್ನು ಕಂಡು ಬಹುವಾಗಿ ಇಷ್ಟ ಪಟ್ಟಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು, “ಧನಂಜಯ ಅವರನ್ನು ಸಿನಿಮಾಗಳಲ್ಲಿ ನೋಡುವುದೇ ಒಂದು ಖುಷಿ. ’21 ಅವರ್ಸ್’ ಒಂದು ಕುತೂಹಲಕಾರಿ ಕಥಾಹಂದರ. ಧನಂಜಯ ಅವರು ಅಧ್ಭುತವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತವನ್ನು ಇಷ್ಟಪಟ್ಟೆ” ಎಂದು ಹೇಳಿಕೊಂಡಿದ್ದಾರೆ. ಧನಂಜಯ ಅವರೂ ಸಹ, “ಮನಸಾರೆ ಬರಮಾಡಿಕೊಂಡು, ಕೈಯಾರೆ ದೋಸೆ ಹಾಕಿಕೊಟ್ಟು, ಚಿತ್ರದ ಬಗೆಗೆ ಅನಿಸಿದನ್ನೆಲ್ಲ ಹಂಚಿಕೊಂಡ ನಿಮ್ಮ ಆತಿಥ್ಯಕ್ಕೆ ಚಿತ್ರತಂಡ ಧನ್ಯ. ನಿಮ್ಮ ನೆರನುಡಿಗೆ, ಪ್ರಾಮಾಣಿಕತೆಯ ಮಾತುಗಳಿಗೆ ನಾನು ಅಭಿಮಾನಿ” ಎಂದು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.




’21 ಅವರ್ಸ್’ ಚಿತ್ರ ಜೈ ಶಂಕರ್ ಅವರ ಚೊಚ್ಚಲ ನಿರ್ದೇಶನದ ಪ್ರಯತ್ನ. ಮಲಯಾಳಿ ಹುಡುಗಿಯೊಬ್ಬಳು ಬೆಂಗಳೂರಿನಲ್ಲಿ ಕಾಣೆಯಾಗೋ ಪ್ರಕರಣವನ್ನ ಬೆನ್ನಟ್ಟಿ ಹೊರಡೋ ಕಥೆ ಚಿತ್ರದಲ್ಲಿದೆ. ಈ ಇನ್ವೆಸ್ಟಿಗೇಟಿವ್ ಥ್ರಿಲರ್ ನಲ್ಲಿ ಡಾಲಿ ಅವರು ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ. ಧನಂಜಯ ಅವರ ಜೊತೆಗೆ ಮಲಯಾಳಂ ನ ದುರ್ಗ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರೂಪರ್ಟ್ ಫೆರ್ನಾಂಡಿಸ್ ಅವರ ಸಂಗೀತ ಚಿತ್ರದಲ್ಲಿದೆ. ಈಗಾಗಲೆ ಟ್ರೈಲರ್ ಹಾಗು ಹಾಡುಗಳನ್ನು ಬಿಡುಗಡೆಗೊಳಿಸಿರುವ ಚಿತ್ರತಂಡ ಇದೇ ಮೇ 20ಕ್ಕೆ ರಾಜ್ಯದಾದ್ಯಂತ ಬಿಡುಗಡೆ ಕಾಣಲಿದೆ.








